ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ದಿನವೂ ಲಕ್ಷಾಂತರ ಜನ ಸಂಚಾರ ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ, ಪ್ರಮುಖ ಕಾರ್ಪೋರೇಟ್ ಸಂಸ್ಥೆಯಾದ ಬಯೋಕಾನ್ ತನ್ನ ಉದ್ಯೋಗಿಗಳಿಗೆ ಮೆಟ್ರೋ ಬಳಕೆಗೆ ವಿಶೇಷ ರಿಯಾಯಿತಿ ನೀಡಲು ಮುಂದಾಗಿದೆ.
ಈ ಕ್ರಮದ ಮೂಲಕ ಮೆಟ್ರೋ ಬಳಕೆಯನ್ನು ಉತ್ತೇಜಿಸುವುದರ ಜೊತೆಗೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಹಳದಿ ಮೆಟ್ರೋ ಮಾರ್ಗದಲ್ಲಿ ದಿನಕ್ಕೆ ಸುಮಾರು 25 ಸಾವಿರ ಜನ ಪ್ರಯಾಣ ಮಾಡುತ್ತಿದ್ದು, ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಮೆಟ್ರೋ ಬಳಸುವವರಿಗೆ ₹2000 ರಿಯಾಯಿತಿ ಕಾರ್ಡ್
ಬಯೋಕಾನ್ ಸಂಸ್ಥೆಯ ವತಿಯಿಂದ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಮೆಟ್ರೋ ಬಳಕೆ ಮಾಡುವ ಉದ್ಯೋಗಿಗಳಿಗೆ ₹2000 ಮೌಲ್ಯದ ಮೆಟ್ರೋ ಕಾರ್ಡ್ ನೀಡುವ ಯೋಜನೆ ಘೋಷಿಸಲಾಗಿದೆ.
ಈ ಕಾರ್ಯಕ್ರಮವು ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ಸಮೀಪ ನಡೆದಿದ್ದು, ಇದೇ ಸಂದರ್ಭದಲ್ಲಿ ಟಮ್ಮೊಕ್ (Tummoc) ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಲಾಯಿತು.
ಈ ಆಪ್ ಮೂಲಕ ಉದ್ಯೋಗಿಗಳಿಗೆ:
- ಮೆಟ್ರೋ ಪಾಸ್ ಮಾಹಿತಿ
- ಬಸ್ ಪಾಸ್ ಮಾಹಿತಿ
- ರಿಯಲ್ ಟೈಮ್ ಟ್ರಾನ್ಸ್‌ಪೋರ್ಟ್ ಮಾಹಿತಿ
- ವಾಲೆಟ್ ಮೂಲಕ ಹಣ ರಿಫಂಡ್ ಸೌಲಭ್ಯ
ಹೀಗೆ ಹಲವಾರು ಸೇವೆಗಳು ಲಭ್ಯವಾಗಲಿವೆ.
ಇದನ್ನು ಓದಿ: Bengaluru Ring Road: 210 ಕಿ.ಮೀ ಯೋಜನೆ ,12 ಉಪನಗರಗಳಿಗೆ ಹೊಸ ಸಂಪರ್ಕ !
ಟಮ್ಮೊಕ್ (Tummoc) ಆಪ್ ಏನು?
ಈ ಯೋಜನೆಯ ಪ್ರಮುಖ ಭಾಗವಾಗಿರುವ Tummoc App ಒಂದು ಸಂಪೂರ್ಣ ಸಾರಿಗೆ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಈ ಆಪ್‌ನಲ್ಲಿ:
✔ ಮೆಟ್ರೋ ಸಮಯ ಮಾಹಿತಿ
✔ ಬಸ್ ಸಮಯ ಮಾಹಿತಿ
✔ ಕೊನೆ ಮೈಲಿ ಸಂಪರ್ಕ ಮಾಹಿತಿ
✔ ಪ್ರಯಾಣ ಮಾರ್ಗ ವಿವರ
ಇವುಗಳನ್ನು ರಿಯಲ್ ಟೈಮ್‌ನಲ್ಲಿ ಪಡೆಯಬಹುದು.
ಈ ಯೋಜನೆಯನ್ನು WRI ಇಂಡಿಯಾ ನೇತೃತ್ವದಲ್ಲಿ, ಹಲವು ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೆ ತರಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ
👉 ಹೆಚ್ಚು ಜನರನ್ನು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಉತ್ತೇಜಿಸುವುದು
👉 ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವುದು
👉 ವಾಯುಮಾಲಿನ್ಯ ನಿಯಂತ್ರಿಸುವುದಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾವಿರಾರು ಉದ್ಯೋಗಿಗಳು ಪ್ರತಿದಿನ ಖಾಸಗಿ ವಾಹನ ಬಳಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಈ ಯೋಜನೆ ಮಹತ್ವದ ಪಾತ್ರವಹಿಸಲಿದೆ.
ಮೆಟ್ರೋಸುಧಾರಣೆಗೆ ಕಿರಣ್ ಮಜುಂದಾರ್ ಸೂಚನೆ
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಈ ಯೋಜನೆ ಬಗ್ಗೆ ಮಾತನಾಡುತ್ತಾ, ಮೆಟ್ರೋ ಬಳಕೆ ಹೆಚ್ಚಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದ್ದಾರೆ.
ಅವರ ಪ್ರಕಾರ ಮೆಟ್ರೋ ಬಳಕೆ ಮಾಡಿದರೆ ಪ್ರಯಾಣ ಸಮಯ ಕಡಿಮೆ ಆಗುತ್ತದೆ, ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತವೆ ವಾಯುಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಅದರ ಜೊತೆಗೆ, ಮೆಟ್ರೋ ಸೇವೆಯನ್ನು ಇನ್ನಷ್ಟು ಸುಧಾರಿಸಲು ಹಲವು ಸಲಹೆಗಳನ್ನೂ ನೀಡಿದ್ದಾರೆ. ಕಿರಣ್ ಮಜುಂದಾರ್ ಶಾ ಕೆಲವು ಹೊಸ ಐಡಿಯಾಗಳನ್ನು ಸೂಚಿಸಿದ್ದಾರೆ.
✔ ಈವೆಂಟ್ ಟಿಕೆಟ್ ಜೊತೆಗೆ ಮೆಟ್ರೋ ಟಿಕೆಟ್ ಸೇರಿಸುವುದು
✔ ಮೆಟ್ರೋ ಸ್ಟೇಷನ್‌ಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್
✔ ಸ್ಟೇಷನ್‌ಗಳಲ್ಲಿ ವರ್ಕಿಂಗ್ ಸ್ಪೇಸ್ ನಿರ್ಮಾಣ
ಈ ಕ್ರಮಗಳು ಜಾರಿಗೆ ಬಂದರೆ ಮೆಟ್ರೋ ಬಳಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ.
ಮೆಟ್ರೋ ಸೇವೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ
ಪ್ರಸ್ತುತ ಮೆಟ್ರೋ ರೈಲುಗಳು ಸುಮಾರು 12 ನಿಮಿಷಗಳ ಅಂತರದಲ್ಲಿ ಬರುತ್ತಿವೆ. ಇದನ್ನು 5 ನಿಮಿಷಕ್ಕಿಂತ ಕಡಿಮೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಹೆಚ್ಚುವರಿ ಕ್ರಮಗಳು:
- ಮೆಟ್ರೋ ಟ್ರೈನ್ ಸಂಖ್ಯೆ ಹೆಚ್ಚಿಸುವುದು
- ಲಾಸ್ಟ್ ಮೈಲ್ ಸಂಪರ್ಕ ಸುಧಾರಣೆ
- ಇವಿ ಆಟೋ ಸೇವೆ ಆರಂಭ
ಇವುಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಲಾಸ್ಟ್ ಮೈಲ್ ಸಂಪರ್ಕಕ್ಕೆ ಹೊಸ ಯೋಜನೆ
ಮೆಟ್ರೋ ಬಳಕೆ ಹೆಚ್ಚಿಸಲು ಲಾಸ್ಟ್ ಮೈಲ್ ಸಂಪರ್ಕ ಬಹಳ ಮುಖ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಇವಿ ಆಟೋಗಳು, ಪಿಂಕ್ ಆಟೋ ಸೇವೆಗಳು, ಫೀಡರ್ ಬಸ್ ವ್ಯವಸ್ಥೆಇವುಗಳನ್ನು ಹೆಚ್ಚಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಈ ಮೂಲಕ ಮೆಟ್ರೋ ನಿಲ್ದಾಣದಿಂದ ಮನೆ ಅಥವಾ ಕಚೇರಿಗೆ ಸುಲಭವಾಗಿ ತಲುಪಲು ಸಾಧ್ಯವಾಗಲಿದೆ.
BMTC ಮತ್ತು ಮೆಟ್ರೋ ಫೀಡರ್ ಸೇವೆ ಹೆಚ್ಚಳ
BMTC ಅಧಿಕಾರಿಗಳು ಹೇಳಿರುವಂತೆ
- ಹಳದಿ ಲೈನ್ ಮೆಟ್ರೋದಲ್ಲಿ 22 ಫೀಡರ್ ಸೇವೆಗಳು ಇವೆ
- ಒಟ್ಟು 250 ಫೀಡರ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ
- ದಿನಕ್ಕೆ ಸುಮಾರು 2 ಲಕ್ಷ ಜನ ಈ ಸೇವೆ ಬಳಸುತ್ತಿದ್ದಾರೆ
ಇದರ ಜೊತೆಗೆ, ಇನ್ನೂ 4500 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ತರಲು ಯೋಜನೆ ರೂಪಿಸಲಾಗಿದೆ.
ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿ
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದರೂ ಮೂಲಸೌಕರ್ಯ ಅಭಿವೃದ್ಧಿ ಸಮರ್ಪಕವಾಗಿ ನಡೆಯದಿರುವುದು ಸಮಸ್ಯೆಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಬಯೋಕಾನ್ ಸಂಸ್ಥೆಯ ಈ ಕ್ರಮವನ್ನು ನಗರ ಪೊಲೀಸ್ ಅಧಿಕಾರಿಗಳು ಸಹ ಶ್ಲಾಘಿಸಿದ್ದಾರೆ.