ರೆಣುಕಾ ಸ್ವಾಮಿ ಕೊಲೆ ಪ್ರಕರಣ: ʼʼಪವಿತ್ರಾ ಗೌಡಗೆ ಮನೆ ಊಟ ರದ್ದುʼʼ, ಹೈಕೋರ್ಟ್ ಆದೇಶ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಅನುಮತಿಯೊಂದಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನೀಡಿದ್ದ ಸೌಲಭ್ಯವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳಿಗೂ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಈ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಹೈಕೋರ್ಟ್ ನೀಡಿರುವ ಆದೇಶ ಮತ್ತಷ್ಟು ಗಮನ ಸೆಳೆದಿದೆ. ಈಗಾಗಲೇ 57ನೇ ಸಿಸಿಎಚ್ ನ್ಯಾಯಾಲಯವು ಆರೋಪಿಗಳಿಗೆ ವಾರಕ್ಕೊಮ್ಮೆ ಅಥವಾ ವೈದ್ಯಕೀಯ ಕಾರಣಗಳಿದ್ದರೆ ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದರು.

ಆದರೆ ಈ ವಿಶೇಷ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ಸಮಾನ ಸೌಲಭ್ಯ ದೊರೆಯಬೇಕು. ಕೆಲವರಿಗೆ ಮಾತ್ರ ವಿಶೇಷ ಅನುಮತಿ ನೀಡುವುದು ಸರಿಯಲ್ಲ ಎಂಬ ವಾದವನ್ನು ಮುಂದಿಟ್ಟುಕೊಳ್ಳಲಾಯಿತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ಟ್ರಯಲ್ ಕೋರ್ಟ್ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. “ಆರೋಪಿ ಕೇಳಿದ ಕೂಡಲೇ ಮನೆ ಊಟ ನೀಡಲು ಅವಕಾಶ ನೀಡಲಾಗುವುದಿಲ್ಲ. ವೈದ್ಯಕೀಯ ಕಾರಣಗಳು ಸ್ಪಷ್ಟವಾಗಿದ್ದಲ್ಲಿ ಮಾತ್ರ ಸಡಿಲಿಕೆ ಸಾಧ್ಯ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜೈಲಧಿಕಾರಿಗಳಿಂದ ಮನೆ ಊಟಕ್ಕೆ ವಿರೋಧ :

ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಆರಂಭದಿಂದಲೇ ಮನೆ ಊಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜೈಲಿನಲ್ಲಿ ಎಫ್‌ಎಸ್‌ಎಸ್‌ಎಐ ಮಾನದಂಡದಂತೆ ಪೌಷ್ಟಿಕ, ಶುಚಿ ಮತ್ತು ಆರೋಗ್ಯಕರ ಆಹಾರವನ್ನು ಎಲ್ಲ ಕೈದಿಗಳಿಗೂ ನೀಡಲಾಗುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಜೈಲಿನಲ್ಲೇ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿದ್ದರೆ, ಮನೆ ಊಟಕ್ಕೆ ಅವಕಾಶ ನೀಡುವ ಅವಶ್ಯಕತೆ ಏನು?” ಎಂಬ ಪ್ರಶ್ನೆಯನ್ನು ಅಧಿಕಾರಿಗಳು ಎತ್ತಿದ್ದರು. ವಿಶೇಷ ಸೌಲಭ್ಯ ನೀಡುವುದು ಇತರ ಕೈದಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದರು.

ಹೈಕೋರ್ಟ್‌ನ ಅಂತಿಮ ತೀರ್ಪು :

high court57ನೇ ಸಿಸಿಎಚ್ ನ್ಯಾಯಾಲಯವು ಮೊದಲು ನೀಡಿದ್ದ ಆದೇಶದ ಪ್ರಕಾರ ವಾರಕ್ಕೊಮ್ಮೆ ಮನೆ ಊಟ ತರಿಸಿಕೊಳ್ಳಲು ಅವಕಾಶ ಇತ್ತು. ಜೊತೆಗೆ, ವೈದ್ಯಕೀಯ ಪ್ರಮಾಣಪತ್ರ ನೀಡಿದರೆ ಹೆಚ್ಚುವರಿ ದಿನಗಳಲ್ಲಿಯೂ ಮನೆ ಊಟಕ್ಕೆ ಅವಕಾಶ ನೀಡಬಹುದೆಂದು ತಿಳಿಸಲಾಗಿತ್ತು.

ಈ ಆದೇಶದ ಆಧಾರದ ಮೇಲೆ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳು ಜೈಲಿಗೆ ಮನೆಯಿಂದ ಆಹಾರ ತರಿಸಿಕೊಳ್ಳುತ್ತಿದ್ದರು. ಈ ನಡುವೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೂ ವೈದ್ಯಕೀಯ ಕಾರಣ ನೀಡಿದರೆ ಸೌಲಭ್ಯ ವಿಸ್ತರಿಸಬಹುದು ಎಂಬ ಮಾತು ಕೇಳಿಬಂದಿತ್ತು.

ಕಳೆದ ತಿಂಗಳಲ್ಲೇ ಹೈಕೋರ್ಟ್ ತಾತ್ಕಾಲಿಕವಾಗಿ ಮನೆ ಊಟಕ್ಕೆ ತಡೆ ನೀಡಿತ್ತು. ಇದೀಗ ಆ ತಡೆಯನ್ನೇ ಅಂತಿಮ ಆದೇಶವನ್ನಾಗಿ ಮಾಡಿ, ಟ್ರಯಲ್ ಕೋರ್ಟ್ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಇದರಿಂದ ಪವಿತ್ರಾ ಗೌಡ ಸೇರಿದಂತೆ ನಾಗರಾಜ್ ಮತ್ತು ಲಕ್ಷ್ಮಣ್ ಅವರಿಗೆ ಜೈಲಿನ ಆಹಾರವೇ ಅಂತಿಮವಾಗಿದ್ದು, ಮನೆ ಊಟ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ನ್ಯಾಯಾಲಯದ ಮುಂದಿನ ವಾದಗಳು :

ಇದೇ ವೇಳೆ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮತ್ತಷ್ಟು ವಾದಗಳು ನಡೆದಿವೆ. ಎ3 ಆರೋಪಿ ಪರ ವಕೀಲರು ತನಿಖಾಧಿಕಾರಿಯನ್ನು ಆರೋಪಿಯನ್ನಾಗಿ ಮಾಡುವ ಅರ್ಜಿಯನ್ನು “ಹಾಸ್ಯಾಸ್ಪದ” ಎಂದು ಹೇಳಿದ್ದಾರೆ.

“ತನಿಖಾಧಿಕಾರಿ ಸಾಕ್ಷ್ಯ ತಿದ್ದಿದ್ದರೆ ಅಥವಾ ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದರೆ, ವಿಚಾರಣೆ ವೇಳೆ ಅದನ್ನು ಸಾಬೀತುಪಡಿಸಬಹುದು” ಎಂದು ಅವರು ವಾದಿಸಿದರು. ಪ್ರಕರಣದ ವಿಚಾರಣೆ ಹಂತದಲ್ಲೇ ಈ ಆರೋಪಗಳನ್ನು ಪರಿಶೀಲಿಸಬಹುದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನೊಂದೆಡೆ ದರ್ಶನ್ ಪರ ವಕೀಲರು ಪ್ರತಿದಿನವೂ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆದರೆ ವಿಶೇಷ ಸಾರ್ವಜನಿಕ ಅಭಿಯೋಜಕರು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಪ್ರತಿದಿನ ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎಂದು ಪ್ರತಿವಾದಿಸಲಾಗದೆ.